ನಕುಲ
ಪಾಂಡುರಾಜನ ಕಿರಿಯ ಹೆಂಡತಿ ಮಾದ್ರಿಯಲ್ಲಿ ಅಶ್ವಿನೀದೇವತೆಗಳಿಂದ ಹುಟ್ಟಿದ ಅವಳಿ ಮಕ್ಕಳಲ್ಲಿ ಒಬ್ಬ. ಸಹದೇವ ಈತನ ಒಡಹುಟ್ಟಿದವ. ಧರ್ಮರಾಯ, ಭೀಮ, ಅರ್ಜುನ ಈತನ ಬಲತಾಯ ಮಕ್ಕಳು. ಈತ ರೂಪದಲ್ಲಿ ಸುಂದರ. ಕುಂತಶಾಸ್ತ್ರದಲ್ಲಿ ನಿಪುಣ. ಅಶ್ವಶಾಸ್ತ್ರದಲ್ಲಿ ಪ್ರವೀಣ. ಈತನಿಗೆ ದ್ರೌಪದಿಯಲ್ಲದೆ ಶಿಶುಪಾಲನ ಮಗಳೂ ಧೃಷ್ಟಕೇತುವಿನ ಸೋದರಿಯೂ ಆದ ರೇಣುಮತಿ ಎಂಬ ಹೆಂಡತಿಯಿದ್ದಳು. ಈತ ದ್ರೌಪದಿಯಲ್ಲಿ ಶತಾನೀಕ, ರೇಣುಮತಿಯಲ್ಲಿ ನಿರುಮಿತ್ರ ಎಂಬ ಪುತ್ರರನ್ನು ಪಡೆದ. ಧರ್ಮರಾಜ ನಡೆಸಿದ ರಾಜಸೂಯ ಯಾಗದಲ್ಲಿ ವಿಜಯ ಪ್ರಯಾಣ ಮಾಡಿ ವಿಫುಲವಾದ ಐಶ್ವರ್ಯವನ್ನೂ ಗೋವುಗಳನ್ನೂ ಅಶ್ವಗಳನ್ನೂ ತಂದ. ಅಜ್ಞಾತವಾಸ ಸಮಯದಲ್ಲಿ ದಾಮಗ್ರಂಥಿಯೆಂಬ ಹೆಸರಿನಿಂದ ವಿರಾಟನ ಅಶ್ವಪಾಲಕನಾಗಿದ್ದ. ಸಂಧಿಗಾಗಿ ಹೊರಟ ಕೃಷ್ಣನಿಗೆ ಸಂಧಿ ಮಾಡಿಕೊಳ್ಳುವುದು ಲೇಸು ಎಂಬುದೇ ತನ್ನ ಅಭಿಮತವೆಂದು ತಿಳಿಸಿದ. ಯುದ್ಧವೇ ನಿರ್ಣಯವಾದಾಗ ಅದರಲ್ಲಿ ತಾನೂ ಪಾಲ್ಗೊಂಡ. ರಣರಂಗದಲ್ಲಿ ಸುಘೋಷವೆಂಬ ಶಂಖವನ್ನು ಊದಿ, ವೈಷ್ಣವ ಎಂಬ ಧನುಸ್ಸನ್ನು ಹಿಡಿದು ಯುದ್ಧಮಾಡಿದ. ಈತನ ರಥಕ್ಕೆ ಕಾಂಬೋಜದ ಕುದುರೆಗಳನ್ನು ಹೂಡಲಾಗಿದ್ದು ಧ್ವಜದಲ್ಲಿ ಶರಭ ಚಿಹ್ನೆ ಇತ್ತು. ಹದಿನಾಲ್ಕನೆಯ ದಿನದಲ್ಲಿ ಚಿತ್ರಸೇನ ಮೊದಲಾದ ಕರ್ಣನ ಮೂವರು ಮಕ್ಕಳನ್ನು ಕೊಂದ. ಧರ್ಮರಾಯನೊಂದಿಗೆ ಮಹಾಪ್ರಸ್ಥಾನ ಮಾಡಿ ದೇಹತ್ಯಾಗ ಮಾಡಿದ.			
	(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ